ಭಾರತದ ಶಾಲಾ ಶಿಕ್ಷಕರು ಉತ್ತಮ ಪಾಠ ಯೋಜನೆಗಳನ್ನು ವೇಗವಾಗಿ ಸಿದ್ಧಪಡಿಸುತ್ತಿದ್ದಾರೆ, ಕೋಪೈಲಟ್ ಗೆ ಧನ್ಯವಾದಗಳು

A male teacher in a blue plaid shirt interacting with students in blue uniforms in a classroom

ಕನಕಪುರ, ಕರ್ನಾಟಕ: ಕಲ್ಪವೃಕ್ಷ ತೆಂಗಿನಮರಗಳಿಂದ ಕೂಡಿರುವ ಈ ಹಳ್ಳಿಯಲ್ಲಿ ಐದು ಕೊಠಡಿಗಳ ಒಂದು ಶಾಲೆ ಇದೆ. ಇಲ್ಲಿನ ಶಿಕ್ಷಕರಾದ ರವೀಂದ್ರ ಕೆ.ನಾಗಯ್ಯ ಅವರು ತಮ್ಮ 7 ನೇ ತರಗತಿಯ ವಿಜ್ಞಾನ ತರಗತಿಯಲ್ಲಿ ಇಂದು ಒಂದು ಅಚ್ಚರಿ ಮೂಡಿಸಿದ್ದಾರೆ.

ಈ ದಿನದ ವಿಷಯ “ಆ್ಯಸಿಡ್ಸ್, ಬೇಸ್ ಗಳು ಮತ್ತು ಸಾಲ್ಟ್ಸ್’’. ಅಂದರೆ, ಆಮ್ಲಗಳು, ಬೇಸ್ ಗಳು ಮತ್ತು ಲವಣಗಳು. ಇಲ್ಲಿ ರವೀಂದ್ರ ಅವರು ಲಿಟ್ಮಸ್ ಪೇಪರ್, ಹೈಡ್ರೋಕ್ಲೋರಿಕ್ ಆ್ಯಸಿಡ್ ಮತ್ತು ಅಡುಗೆ ಸೋಡಾಗಳೊಂದಿಗೆ ದಾಸವಾಳದ ಹೂವು ಮತ್ತು ನಿಂಬೆಹಣ್ಣಿನ ರಸದ ಸಣ್ಣ ಬೀಕರ್ ಅನ್ನು ಸಿದ್ಧಪಡಿಸಿದ್ದಾರೆ. ಓರ್ವ ವಿದ್ಯಾರ್ಥಿಯು ದಾಸವಾಳದ ರಸದೊಂದಿಗೆ ನಿಂಬೆ ಹುಳಿ ಬೆರಸುವುದನ್ನು ಉಳಿದ ವಿದ್ಯಾರ್ಥಿಗಳು ಬೆರಗಾಗಿ ನೋಡುತ್ತಿದ್ದರು. ಹೀಗೆ ಮಿಶ್ರಣ ಮಾಡಿದ ದ್ರಾವಣವು ಹಸಿರು ಬಣ್ಣಕ್ಕೆ ತಿರುಗುತ್ತದೆ, ಇದು ಆಮ್ಲೀಯತೆಯನ್ನು ಸೂಚಿಸುತ್ತದೆ. ಇದೇ ವೇಳೆ, ಮತ್ತೊಬ್ಬ ವಿದ್ಯಾರ್ಥಿ ದಾಸವಾಳದ ರಸ ಮತ್ತು ಅಡುಗೆ ಸೋಡಾವನ್ನು ಬೆರೆಸುತ್ತಾನೆ, ಅದು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ.

ಮಕ್ಕಳೇ, ದಾಸವಾಳದ ರಸವು ನೈಸರ್ಗಿಕ pH ಸೂಚಕವೆಂದು ಎಷ್ಟು ಜನರಿಗೆ ತಿಳಿದಿದೆ ಹೇಳಿ?

ಶಿಕ್ಷಾ ಕೋಪೈಲಟ್ ಎಂಬ AI ಡಿಜಿಟಲ್ ಸಹಾಯಕದ ನೆರವಿನಿಂದ ರವೀಂದ್ರ ಅವರು ಇಂತಹ ಚಟುವಟಿಕೆಗಳ ಕಲ್ಪನೆಯನ್ನು ರೂಪಿಸಿದ್ದರು. ಈ ಶಿಕ್ಷಾ ಕೋಪೈಲಟ್ ನಲ್ಲಿ ಚಟುವಟಿಕೆಗಳು, ವಿಡಿಯೋಗಳು ಮತ್ತು ರಸಪ್ರಶ್ನೆಗಳು ಕ್ಷಣಾರ್ಧದಲ್ಲಿ ಲಭ್ಯವಿದ್ದು, ಅಸಂಖ್ಯಾತ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಸಾಫ್ಟ್ ವೇರ್ ಅನ್ನು ಲಾಭರಹಿತ ಸಂಸ್ಥೆಯಾಗಿರುವ ಶಿಕ್ಷಣ ಫೌಂಡೇಶನ್ ಅಭಿವೃದ್ಧಿಪಡಿಸಿದ್ದು, ಮೊದಲಿಗೆ ಇಂಗ್ಲೀಷ್ ನಲ್ಲಿ ಮತ್ತು ನಂತರದಲ್ಲಿ ಕರ್ನಾಟಕ ರಾಜ್ಯದ 30 ಶಾಲೆಗಳ 30 ಶಿಕ್ಷಕರಿಂದ ಕನ್ನಡ ಭಾಷೆಯ ಸಾಫ್ಟ್ ವೇರ್ ಅನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಎಲ್ಲಾ ಶಿಕ್ಷಕರು ಭರವಸೆ ಮೂಡಿಸುವ ರೀತಿಯಲ್ಲಿ ಫಲಿತಾಂಶಗಳನ್ನು ನೀಡಿದ್ದಾರೆ.

A male teacher fills out fields on his laptop screen
ಶಿಕ್ಷಾ ಕೋಪೈಲಟ್ ನಲ್ಲಿ ಪಠ್ಯವನ್ನು ಹೇಗೆ ರಚಿಸಬಹುದು ಎಂಬುದನ್ನು ಶಿಕ್ಷಕ ರವೀಂದ್ರ ಕೆ ನಾಗಯ್ಯ ಪ್ರಸ್ತುತಪಡಿಸುತ್ತಿರುವುದು.

ಈ ಶಿಕ್ಷಾ ಕೋಪೈಲಟ್ Project VeLLM ನ ಭಾಗವಾಗಿದೆ. ಈ ವಿಶೇಷವಾದ AI ಕೋಪೈಲಟ್ ಗಳನ್ನು ಶಿಕ್ಷಕರಿಂದ ರೈತರವರೆಗೆ, ಸಣ್ಣ ವ್ಯಾಪಾರಗಳ ಮಾಲೀಕರಿಗೆ ಲಭ್ಯವಾಗುವಂತೆ ಮಾಡಲು ಅನುಕೂಲವಾಗುವ ರೀತಿಯಲ್ಲಿ ಸಾಫ್ಟ್ ವೇರ್ ಅನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಮೈಕ್ರೋಸಾಫ್ಟ್ ರೀಸರ್ಚ್ ಇಂಡಿಯಾದ ಪ್ಲಾಟ್ ಫಾರ್ಮ್ ಗೆ ವಹಿಸಲಾಗಿತ್ತು. ಅದರಲ್ಲಿ ಸಫಲವೂ ಆಗಿದೆ. ಸಂಸ್ಕೃತದಲ್ಲಿ ಶಿಕ್ಷಾ ಎಂದರೆ ಶಿಕ್ಷಣ ಎಂದರ್ಥ.

ಈ ಸಾಫ್ಟ್ ವೇರ್ Microsoft Azure OpenAI Service ನಲ್ಲಿ ಬಿಲ್ಟ್ ಆನ್ ಆಗಿದೆ ಮತ್ತು ಶಾಲಾ ಚಟುವಟಿಕೆಗಳು ಮತ್ತು ಕಲಿಕಾ ಅಂಶಗಳನ್ನು ಒಳಗೊಂಡಿದೆ. ಅಝೂರ್ ಕಾಗ್ನೆಟಿವ್ ಸರ್ವೀಸ್ ಪಠ್ಯಪುಸ್ತಕಗಳಲ್ಲಿರುವ ಪಠ್ಯವನ್ನು ಸೇರಿಸಲು ಮತ್ತು ವಿಷಯವನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ ಎಂಬುದನ್ನು ಅವಲೋಕನ ಮಾಡಲು ಬಳಸಲಾಗುತ್ತದೆ.

ಶಿಕ್ಷಾ ಕೋಪೈಲಟ್ ನೊಂದಿಗೆ ಭಾರತದಲ್ಲಿನ ಅತಿ ವಿಸ್ತಾರವಾದ ಸರ್ಕಾರಿ ಶಾಲಾ ಶಿಕ್ಷಕರ ಪಡೆಯು ಸದ್ಯದಲ್ಲೇ ವಿಶ್ರಾಂತಿ ಪಡೆಯಬಹುದೆಂದು ಸಂಶೋಧಕರು ಭಾವಿಸುತ್ತಾರೆ ಮತ್ತು ಈ ಸಾಫ್ಟ್ ವೇರ್ ಮೂಲಕ ಅವರು ತಮ್ಮ ವಿದ್ಯಾರ್ಥಿಗಳಿಗೆ ಒಂದು ಅತ್ಯುತ್ತಮ ರೀತಿಯ ಬೋಧನೆಯನ್ನು ಮಾಡಬಹುದಾಗಿದೆ ಹಾಗೂ ಇಂತಹ ಪಠ್ಯಗಳ ಮೂಲಕ ವಿದ್ಯಾರ್ಥಿಗಳಲ್ಲಿ ಲವಲವಿಕೆ ಉಂಟಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

ಶಿಕ್ಷಕರ ದೃಷ್ಟಿಕೋನದಿಂದ ಹೇಳುವುದಾದರೆ ತರಗತಿಗೆ ತಯಾರಿ ಮಾಡಿಕೊಳ್ಳುವ ಸಮಯ ಉಳಿಸುವುದು ಬಹುದೊಡ್ಡ ಪ್ರಯೋಜನವಾಗಿದೆ. ವೆಂಕಟರಾಯನದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ವಿಜ್ಞಾನ ಮತ್ತು ಗಣಿತ ಬೋಧನೆ ಮಾಡಿರುವ ರವೀಂದ್ರ ಅವರು ಒಂದೇ ಪಾಠ ಯೋಜನೆಯನ್ನು ಸಿದ್ಧಪಡಿಸಲು ಸುಮಾರು 40 ನಿಮಿಷ ಬೇಕಾಗುತ್ತಿತ್ತು. ಆದರೆ, ಈಗ ಸಾಫ್ಟ್ ವೇರ್ ನಿಂದಾಗಿ “ನಾವು ಕೇವಲ 10 ನಿಮಿಷದಲ್ಲೇ ಹೊಸ ಪಾಠದ ತಯಾರಿಯನ್ನು ಪೂರ್ಣಗೊಳಿಸಬಹುದಾಗಿದೆ’’ ಎಂದು ಸಂತೋಷದಿಂದ ಹೇಳಿಕೊಳ್ಳುತ್ತಾರೆ.

ಈ ಶಾಲೆಯಲ್ಲಿ 5 ಶಿಕ್ಷಕರು ಮತ್ತು 69 ವಿದ್ಯಾರ್ಥಿಗಳಿದ್ದಾರೆ. ಈ ಮಕ್ಕಳ ಪೋಷಕರಲ್ಲಿ ಬಹುತೇಕರು ಜೀವನೋಪಾಯಕ್ಕಾಗಿ ಮಾವಿನಹಣ್ಣು ಬೆಳೆಯುತ್ತಾರೆ ಅಥವಾ ರೇಷ್ಮೆ ಹುಳು ಸಾಕಾಣಿಕೆಯಲ್ಲಿ ತೊಡಗಿದ್ದಾರೆ. ಆದರೆ, ಸಂಪನ್ಮೂಲಗಳ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ರವೀಂದ್ರ ಯೋಜನೆಗೆ ಬೇಕಾದಂತೆ ಮಾರ್ಪಾಡು ಮಾಡುತ್ತಾರೆ. ವಿದ್ಯಾರ್ಥಿಗಳ ಬಳಿ ಚಟುವಟಿಕೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಹೊಂದಿಸಲು ಸಾಧ್ಯವಾಗದಿದ್ದರೆ, ರವೀಂದ್ರ ಅವರು ಶಿಕ್ಷಾ ಕೋಪೈಲಟ್ ಗೆ ಮತ್ತೊಂದು ಉಪಾಯವನ್ನು ಕೇಳುತ್ತಾರೆ ಮತ್ತು ಅವರು ಕೈಯಲ್ಲಿ ಏನನ್ನು ಹೊಂದಿದ್ದಾರೆ ಎಂಬುದನ್ನೂ ಸೂಚಿಸುತ್ತಾರೆ. ಒಂದು ವೇಳೆ ವಿಡಿಯೋ ತುಂಬಾ ದೊಡ್ಡದಾಗಿದ್ದರೆ ಅದನ್ನು ಚಿಕ್ಕದಾಗಿ ತೋರಿಸುವಂತೆ ಕೇಳುತ್ತಾರೆ. ಅದರಂತೆ ಕಾರ್ಯಯೋಜನೆಯನ್ನು ಮಾರ್ಪಡಿಸುತ್ತಾರೆ ಮತ್ತು ಪ್ರಶ್ನೆಗಳನ್ನೂ ಕೇಳಬಹುದಾಗಿದೆ.

“ಹಳೆಯ ಬೋಧನೆ ಪದ್ಧತಿಯಾದ ಸೀಮೆಸುಣ್ಣ ಮತ್ತು ಕಪ್ಪು ಹಲಗೆಯ ಕಾಲ ಹೋಯಿತು. ಈಗೇನಿದ್ದರೂ ಶಿಕ್ಷಾದಿಂದ ನಾನು ಹೆಚ್ಚು ಸಮಯವನ್ನು ಕಳೆಯುತ್ತಿದ್ದೇನೆ’’ ಎಂದು ರವೀಂದ್ರ ಹೇಳುತ್ತಾರೆ.

ದೊಡ್ಡ ತರಗತಿ ಗಾತ್ರಗಳು

ಪಾಠದ ಯೋಜನೆಗಳನ್ನು ಸಿದ್ಧಪಡಿಸುವುದು ಯಾವಾಗಲೂ ಶ್ರಮದಾಯಕವಾದ ಕೆಲಸವಾಗಿದೆ. ಒಬ್ಬ ಶಿಕ್ಷಕರು ಸರ್ಕಾರಿ ಪಠ್ಯಕ್ರದೊಂದಿಗೆ ಯೋಜನೆ ಸಿದ್ಧಪಡಿಸಲು ಆರಂಭಿಸುತ್ತಾರೆ. ಸಾಮಾನ್ಯವಾಗಿ ಪಠ್ಯಪುಸ್ತಕಗಳನ್ನು ನೋಡಿ, ನಂತರ ಶಾಲೆಯ ಸಂಪನ್ಮೂಲಗಳು, ಕಲಿಯುವವರನ್ನು ಸಿದ್ಧಪಡಿಸುವುದು ಮತ್ತು ಶಿಕ್ಷಕರ ಸ್ವಂತ ಸಾಮರ್ಥ್ಯ ಹಾಗೂ ಅನುಭವದ ಆಧಾರದ ಮೇಲೆ ಒಂದು ಯೋಜನೆಯನ್ನು ರಚಿಸುತ್ತಾರೆ. ಅದು ಸಾಕಷ್ಟು ಸಾ‍ಧ್ಯವಾಗದಿದ್ದರೆ, ಪ್ರಸ್ತುತ ಸಾಮಾಜಿಕ ಮಾಧ್ಯಮ ಮತ್ತು ಆನ್ ಲೈನ್ ವಿಡಿಯೋಗಳಲ್ಲಿ ಮುಳುಗಿ ಹೋಗಿರುವ ಪೀಳಿಗೆಯ ಗಮನವನ್ನು ಸೆಳೆಯುವ ರೀತಿಯಲ್ಲಿ ಸಿದ್ಧಪಡಿಸಬೇಕಾಗುತ್ತದೆ.

ಇಲ್ಲಿ ಶಿಕ್ಷಕರು ಸಹ ಬೇರೆಡೆಗಿಂತ ದೊಡ್ಡ ತರಗತಿ ಗಾತ್ರಗಳೊಂದಿಗೆ ತಮ್ಮ ಹಿಡಿತ ಸಾಧಿಸುತ್ತಾರೆ. ಯುನೆಸ್ಕೊ 2020 ರ ಅಂಕಿಅಂಶಗಳ ಪ್ರಕಾರ ಭಾರತೀಯ ಪ್ರಾಥಮಿಕ ಶಾಲೆಗಳಲ್ಲಿ ಪ್ರತಿ 33 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿದ್ದಾರೆ ಮತ್ತು ವಿಶ್ವಷ ಸರಾಸರಿ 23 ರಷ್ಟಿದ್ದಾರೆ. ಚೀನಾದಲ್ಲಿನ ಅನುಪಾತವು 1:16, ಬ್ರೆಜಿಲ್ ನಲ್ಲಿ 1:20 ಮತ್ತು ಉತ್ತರ ಅಮೇರಿಕಾದಲ್ಲಿ 1:14 ಆಗಿದೆ.

ಬೆಂಗಳೂರು ಮೂಲದ ಶಿಕ್ಷಣ ಫೌಂಡೇಶನ್ ಪ್ರಕಾರ, ಭಾರತದಲ್ಲಿ ಹಳ್ಳಿಗಳ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದು, ನಗರ ಪ್ರದೇಶಗಳ ತರಗತಿಯಲ್ಲಿ ವಿದ್ಯಾರ್ಥಿಗಳಿ ಸಂಖ್ಯೆ 40 ರಿಂದ 80 ಕ್ಕೆ ಹೆಚ್ಚಳವಾಗಿದೆ. “ಹಲವು ವರ್ಷಗಳಿಂದ ಹಲವಾರು ಪೋಷಕರಿಗೆ ಆದಾಯ ಕಡಿಮೆ ಇದ್ದರೂ ತಮ್ಮ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಶಿಕ್ಷಣ ಕೊಡಿಸಬೇಕೆಂಬ ಕಾರಣದಿಂದ ಅದಕ್ಕಾಗಿ ಶುಲ್ಕ ಪಾವತಿಸಲು ಸಾಲ ಮಾಡುತ್ತಿರುವ ಪರಿಪಾಠ ಹೆಚ್ಚಾಗಿದೆ’’ ಎಂದು ಫೌಂಡೇಶನ್ ಸಿಇಒ ಪ್ರಸನ್ನ ವಡೆಯರ್ ಹೇಳುತ್ತಾರೆ.

A man standing with arms crossed in an office
ಶಿಕ್ಷಣ ಫೌಂಡೇಶನ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ವಡೆಯರ್ ತಮ್ಮ ಬೆಂಗಳೂರಿನ ಕಚೇರಿಯಲ್ಲಿ. ಮೈಕ್ರೋಸಾಫ್ಟ್ ಗಾಗಿ ಫೋಟೋ ತೆಗೆದವರು ಸೆಲ್ವಪ್ರಕಾಶ್ ಲಕ್ಷ್ಮಣನ್.

ವಡೆಯರ್ ಅವರು ಕರ್ನಾಟಕದಲ್ಲೇ ಬೆಳೆದು ಕಂಪ್ಯೂಟರ್ ಎಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಮಾಡಲೆಂದು ಯುಎಸ್ ಗೆ ತೆರಳಿದ್ದರು. ಅಲ್ಲಿನ ಟೆಕ್ಸಾಸ್ ಎ&ಎಂ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ನಂತರ ಟೆಕ್ಸಾಸ್ ನ ಆಸ್ಟಿನ್ ನಲ್ಲಿ ಯಶಸ್ವಿ ಸಾಫ್ಟ್ ವೇರ್ ಉದ್ಯಮವನ್ನು ಆರಂಭಿಸಿದರು. 2007 ರಲ್ಲಿ ಭಾರತಕ್ಕೆ ವಾಪಸಾದ ಅವರು ಶಿಕ್ಷಣ ಎಂಬ ಫೌಂಡೇಶನ್ ಸ್ಥಾಪಿಸಿದರು.

“ಶಿಕ್ಷಣದ ಗುಣಮಟ್ಟವನ್ನು ಶಾಶ‍್ವತವಾಗಿ ಹೆಚ್ಚಿಸುವ ಮೂಲಕ ಸರ್ಕಾರಿ ಶಾಲೆಗಳಿಂದ ಮಕ್ಕಳು ಹೊರ ಉಳಿಯುವುದನ್ನು ತಪ್ಪಿಸುವುದು ಶಿಕ್ಷಣ ಫೌಂಡೇಶನ್ ನ ಪ್ರಮುಖ ಉದ್ದೇಶವಾಗಿದೆ. ನಾನು ಶಿಕ್ಷಣವನ್ನು ಏಕೆ ಸೇರಿಕೊಂಡೆ ಎಂದು ಯಾರಾದರೂ ನನ್ನನ್ನು ಕೇಳಿದರೆ ಅದನ್ನು ಮುಚ್ಚುವಂತೆ ಅವರಿಗೆ ಹೇಳುತ್ತೇನೆ’’ ಎಂದು ವಡೆಯರು ಹೇಳಿದರು.

ಶಿಕ್ಷಣ ಸಾಫ್ಟ್ ವೇರ್ ಕಡಿಮೆ ವೆಚ್ಚ, ಪರಿಣಾಮಕಾರಿ ಇಂಟರ್ ವೆನ್ಷನ್ ಗಳಿಗೆ ಹೆಸರನ್ನು ಪಡೆದಿದೆ. ಇದು ಭಾರತದಾದ್ಯಂತ ಆರು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ರಾಜ್ಯಗಳಲ್ಲಿ 50,000 ಕ್ಕೂ ಅಧಿಕ ಶಾಲೆಗಳನ್ನು ಒಳಗೊಂಡಿದೆ ಮತ್ತು ಇದರಿಂದ ಮೂರು ಮಿಲಿಯನ್ ಮಕ್ಕಳು ಪರಯೋಜನ ಪಡೆಯುತ್ತಿದ್ದಾರೆ.

ಉದಾಹರಣೆಗೆ ಇದರ ಪ್ರೇರಣಾ ಯೋಜನೆಯು ವಿದ್ಯಾರ್ಥಿಗಳಿಗೆ ಪೀರ್ ಲೀಡರ್ ಆಗಲು ಅವಕಾಶಗಳನ್ನು ಕಲ್ಪಿಸುತ್ತದೆ ಮತ್ತು ನಿಯಮಿತ ಹಾಜರಾತಿಯಿಂದ ಶೈಕ್ಷಣಿಕ ಮತ್ತು ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡುವವರೆಗೆ ಸಣ್ಣ, ದೈನಂದಿನ ಸಾ‍ಧನೆಗಳಿಗಾಗಿ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ತಂದುಕೊಡುತ್ತದೆ. ಉತ್ತಮ ಸಾಧನೆ ತೋರುವ ವಿದ್ಯಾರ್ಥಿಗಳು ತಮ್ಮ ಶರ್ಟ್ ಗಳಿಗೆ ಫಳಫಳ ಹೊಳೆಯುವಂತಹ ನಕ್ಷತ್ರಗಳು, ಸೇಫ್ಟಿ ಪಿನ್ ಗಳನ್ನು ಪಡೆಯಬುದಾಗಿದೆ. ಮಕ್ಕಳು ಯಾವ ರೀತಿ ಪ್ರೇರಣೆ ಪಡೆಯುತ್ತಿದ್ದಾರೆ ಮತ್ತು ಯಾವ ರೀತಿ ಸಾಧನೆ ಮಾಡಿದ್ದಾರೆ ಎಂಬುದನ್ನು ಪೋಷಕರು ಸುಲಭವಾಗಿ ನೋಡಬಹುದಾಗಿದೆ.

ಪ್ರೇರಣಾವನ್ನು ಕರ್ನಾಟಕ ಸರ್ಕಾರವು 2018 ರಲ್ಲಿ ಅಳವಡಿಸಿಕೊಂಡಿದ್ದು, ಇದೀಗ ರಾಜ್ಯಾದ್ಯಂತ ವಿಸ್ತರಣೆ ಮಾಡಿದೆ.

ಒಂದೆರಡು ವರ್ಷಗಳ ಹಿಂದೆ ವಡೆಯರು ಶಿಕ್ಷಕರು ಹೇಗೆ ಪಾಠಕ್ಕಾಗಿ ತಯಾರು ಮಾಡುವುದರಲ್ಲಿ ಮುಳುಗಿರುತ್ತಾರೆ ಎಂಬುದನ್ನು ಗಮನಿಸಿದರು. ಇಂತಹ ಸಂಕಷ್ಟಗಳಿಂದ ಶಿಕ್ಷಕರನ್ನು ಪಾರು ಮಾಡುವ ಉದ್ದೇಶದಿಂದ ಅದಕ್ಕೆ ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನ ನಡೆಸಿದರು. ಆದರೆ, ಇದಕ್ಕೆ ಪೂರಕವಾದ ತಂತ್ರಜ್ಞಾನ ಅಭಿವೃದ್ಧಿ ಆಗಿರಲಿಲ್ಲ. 2023 ರ ಆರಂಭದಲ್ಲಿ ಮೈಕ್ರೋಸಾಫ್ಟ್ ರೀಸರ್ಚ್ ಇಂಡಿಯಾ ಶಿಕ್ಷಾ ಕೋಪೈಲಟ್ ನೊಂದಿಗೆ ಕೈಜೋಡಿಸಿದಾಗ ವಡೆಯರ್ ಅವರು ಅತ್ಯಂತ ಹೆಚ್ಚು ಸಂತಸಪಟ್ಟರು

ಜನಸಾಮಾನ್ಯರಿಗೆ AI ತಂತ್ರಜ್ಞಾನ

ಶಿಕ್ಷಣ ಸಂಸ್ಥೆಯು ತಾನು ಹುಡುಕುತ್ತಿದ್ದ ತಾಂತ್ರಿಕ ಪರಿಹಾರವನ್ನು ಮೈಕ್ರೋಸಾಫ್ಟ್ ನಲ್ಲಿ ಕಂಡುಕೊಂಡಿದೆ. ಶಿಕ್ಷಣದಲ್ಲಿ ಮೈಕ್ರೋಸಾಫ್ಟ್ ಶಾಲೆಗಳಲ್ಲಿ ಪರಿಹಾರವನ್ನು ಪರೀಕ್ಷಿಸಲು ಒಂದು ಉತ್ತಮ ಮಾರ್ಗವನ್ನು ಕಂಡುಹಿಡಿದಿದೆ ಮತ್ತು ಆಶಾದಾಯಕವಾಗಿ ಸಾಮೂಹಿಕ ದತ್ತು ಪ್ರಕ್ರಿಯೆಗಳಿಗೆ ಪೂರಕವಾಗಿದೆ.

“ಇದು ಜಾಗತಿಕ ಸಮಸ್ಯೆಯಾಗಿದೆ. ಕಲಿಕಾ ಪರಿಸರ ವ್ಯವಸ್ಥೆಯು ತರಗತಿಯಲ್ಲಿ ತಂತ್ರಜ್ಞಾನವನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ ಮತ್ತು ಶಿಕ್ಷಕರು ತಮ್ಮ ಕಲಿಕೆಯ ಚಾಪ್ಸ್ ಅನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಮಕ್ಕಳು ಶಿಕ್ಷಕರಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಾರೆ’’ ಎಂದು ವಡೆಯರು ತಿಳಿಸಿದರು.

ಅಕ್ಷಯ್ ನಂಬಿ ಮತ್ತು ತನುಜಾ ಗನು ಅವರು ಮೈಕ್ರೋಸಾಫ್ಟ್ ರೀಸರ್ಚ್ ಇಂಡಿಯಾದಲ್ಲಿ ಶಿಕ್ಷಾ ಕೋಪೈಲಟ್ ನಲ್ಲಿ ಸಂಶೋಧಕರಾಗಿದ್ದಾರೆ ಮತ್ತು ಇತರ ಯೋಜನೆಗಳಲ್ಲೂ ನಿಕಟವಾಗಿ ಕೆಲಸ ಮಾಡಿದ್ದಾರೆ.

“ಪ್ರಪಂಚದ ನೈಜವಾದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಾವು ಹೇಗೆ GenAI ಅನ್ನು ಅನ್ವಯಿಸಬಹುದು ಎಂಬುದರ ಬಗ್ಗೆ ಚಿಂತನೆ ನಡೆಸಿದ್ದೆವು’’ ಎಂದು ಗನು ಹೇಳುತ್ತಾರೆ.

“ಶಿಕ್ಷಾ ಕೋಪೈಲಟ್ ಬಳಕೆದಾರರು ಅವುಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಹಾಗೂ ಒಟ್ಟಾರೆ ಕೋಪೈಲಟ್ ಅನುಭವನ್ನು ಸುಧಾರಣೆ ಮಾಡಲು ಬಳಕೆದಾರರಿಂದ ಪ್ರತಿಕ್ರಿಯೆಯನ್ನು ಪಡೆಯಲು ಈ ಸಂಶೋಧನೆ ನಮಗೆ ಸಹಕಾರಿಯಾಗಿದೆ’’ ಎಂದು ನಂಬಿ ತಿಳಿಸಿದರು.

Outdoor portrait of a male and female researcher next to each other
ಬೆಂಗಳೂರಿನ ಶಿಕ್ಷಣ ಫೌಂಡೇಶನ್ ಕಚೇರಿಯಲ್ಲಿ ಎಂಎಸ್ಆರ್ ಇಂಡಿಯಾದ ಸಂಶೋಧಕರಾದ (ಎಡದಿಂದ ಬಲಕ್ಕೆ) ಅಕ್ಷಯ್ ನಂಬಿ ಮತ್ತು ತನುಜಾ ಗನು. ಮೈಕ್ರೋಸಾಫ್ಟ್ ಗಾಗಿ ಫೋಟೋ ತೆಗೆದವರು ಸೆಲ್ವಪ್ರಕಾಶ್ ಲಕ್ಷ್ಮಣನ್.

ಜನರೇಟಿವ್ AI ಸಾಧನಗಳನ್ನು ದೊಡ್ಡ ಭಾಷಾ ಮಾದರಿಗಳಲ್ಲಿ (LLM) ರಚಿಸಲಾಗಿದೆ. ಇದು ಪಠ್ಯ, ಕೋಡ್, ಚಿತ್ರಗಳು ಮತ್ತು ಹೆಚ್ಚಿನದನ್ನು ರಚಿಸುವ ನಿಟ್ಟಿನಲ್ಲಿ ಬೃಹತ್ ಪ್ರಮಾಣದ ಡೇಟಾವನ್ನು ಸಂಯೋಜನೆ ಮಾಡುತ್ತದೆ. ಆದರೆ, ಫಲಿತಾಂಶಗಳು ಅಪೂರ್ಣವಾಗಬಹುದು. ಇತ್ತೀಚಿನ ತಿಂಗಳುಗಳಲ್ಲಿ ಕರ್ನಾಟಕ ರಾಜ್ಯದ ಶಿಕ್ಷಣ ಪಠ್ಯಕ್ರಮದಲ್ಲಿ ಸಂಶೋಧಕರು ನಿರ್ದಿಷ್ಟ ಡೊಮೇನ್ ಜ್ಞಾನವನ್ನು ಸೇರಿಸುವ ಮೂಲಕ ನಿಖರತೆಯನ್ನು ಸುಧಾರಿಸಲು ಪ್ರಯತ್ನಿಸಿದ್ದಾರೆ.

ಆ ಜ್ಞಾನದ ಮೂಲದಿಂದ ಮಾಹಿತಿಯನ್ನು ಹಿಂಪಡೆಯುವುದು ದೋಷಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ನಂಬಿ ಹೇಳಿದರು. ಆ ಮಾಹಿತಿಯನ್ನು ನಂತರ ಪಾಠ ಯೋಜನೆಯನ್ನು ರಚಿಸುವ LLM ಗೆ ತರಲಾಗುತ್ತದೆ. ಕೋಪೈಲಟ್ ಬಹುಮಾದರಿಯಾಗಿದೆ. ಅಂದರೆ, ಇದರಲ್ಲಿ ಚಿತ್ರಗಳು ಮತ್ತು ವಿಡಿಯೋ ಹಾಗೂ ಪಠ್ಯವನ್ನು ಅಡಕ ಮಾಡಲಾಗಿರುತ್ತದೆ. ಅದೇ ರೀತಿ ಅಂತರ್ಜಾಲದಿಂದ ಸಾರ್ವಜನಿಕವಾಗಿ ಲಭ್ಯವಿರುವ ವಿಡಿಯೋಗಳನ್ನು ಸೆಳೆಯುತ್ತದೆ. ಅಂತಿಮವಾಗಿ ಅಝೂರ್ ಓಪನ್ AI ಸೇವೆಯ ವಿಷಯವು ಕಂಟೆಂಟ್ ಫಿಲ್ಟರ್ ಮತ್ತು ಸೂಕ್ತವಲ್ಲದ ವಿಷಯವನ್ನು ಹೊರಗಿಡುವ ಪ್ರಾಂಪ್ಟ್ ಗಳ ಕೆಲಸವನ್ನು ಮಾಡುತ್ತದೆ. ಉದಾಹರಣೆಗೆ ಜನಾಂಗೀಯ ಅಥವಾ ಜಾತಿ-ಸಂಬಂಧಿತ ವಿಷಯಗಳು ಅಥವಾ ಸಮಸ್ಯೆಗಳನ್ನು ಹೊರಗಿಡುವ ಕಾರ್ಯ ಮಾಡುತ್ತದೆ. ಈ ಎಲ್ಲದರ ಮೂಲಕ ಶಿಕ್ಷಕರು “ಲೂಪ್ ನಲ್ಲಿ ಪರಿಣತರು’’ ಆಗಲಿದ್ದಾರೆ ಎಂದು ಹೇಳುವ ನಂಬಿ ಅವರು, ವಿದ್ಯಾರ್ಥಿಗಳು ಶಿಕ್ಷಾ ಕೋಪೈಲಟ್ ನೊಂದಿಗೆ ನೇರ ಸಂಪರ್ಕ ಹೊಂದಿರುವುದಿಲ್ಲ ಎಂದು ತಿಳಿಸಿದ್ದಾರೆ.

2023 ರ ಡಿಸೆಂಬರ್ ಅಂತ್ಯದ ವೇಳೆಗೆ ಶಿಕ್ಷಣ ಫೌಂಡೇಶನ್ ಶಿಕ್ಷಾವನ್ನು ಅಳವಡಿಸಿಕೊಂಡ ಶಿಕ್ಷಕರ ಸಮೀಕ್ಷೆ ನಡೆಸಿ ಅವರ ಅನುಭವಗಳ ಮಾಹಿತಿ ಪಡೆಯಿತು. ನಗರ ಪ್ರದೇಶದ 5 ಶಾಲೆಗಳು ಮತ್ತು ಗ್ರಾಮಾಂತರ ಪ್ರದೇಶದ 25 ಶಾಲೆಗಳ ಶಿಕ್ಷಕರನ್ನು ಸಮೀಕ್ಷೆಗೆ ಒಳಪಡಿಸಲಾಯಿತು. ಇವರಲ್ಲಿ ಬಹುತೇಕ ಶಿಕ್ಷಕರು ಕನ್ನಡವನ್ನು ಕಲಿಸುವವರು ಮತ್ತು ಕೇವಲ ಆರು ಮಂದಿ ಇಂಗ್ಲೀಷ್ ಕಲಿಸುವವರಿದ್ದರು.

ಶಿಕ್ಷಾ ಕೋಪೈಲಟ್ ತಮ್ಮ ಪಾಠ ಯೋಜನೆಯನ್ನು ಸಿದ್ಧಪಡಿಸುವ ಸಮಯವನ್ನು ಒಂದು ಗಂಟೆ ಮತ್ತು ಅದಕ್ಕಿಂತಲೂ ಹೆಚ್ಚು ಸಮಯವನ್ನು ಕೇವಲ 5 ರಿಂದ 15 ನಿಮಿಷಕ್ಕೆ ಇಳಿಸಿದೆ ಎಂದು ಬಹುತೇಕ ಶಿಕ್ಷಕರು ಹೇಳಿಕೊಂಡಿದ್ದಾರೆ. ಇವರಲ್ಲಿ ಶೇ.90 ರಷ್ಟು ಶಿಕ್ಷಕರು ಕೇವಲ ಸಣ್ಣ ಪುಟ್ಟ ಮಾರ್ಪಾಡುಗಳನ್ನು ಮಾಡಿದರೆ ಸಾಕು ತಮ್ಮ ಪಾಠ ಯೋಜನೆಗಳು ಸಿದ್ಧವಾಗುತ್ತವೆ ಎಂದಿದ್ದಾರೆ. ಪ್ರತಿ ಶಿಕ್ಷಕರು ವಾರಕ್ಕೆ ಸರಾಸರಿ ಮೂರರಿಂದ ನಾಲ್ಕು ಪಾಠ ಯೋಜನೆಗಳನ್ನು ಸಿದ್ಧಪಡಿಸುವುದಾಗಿ ಹೇಳುತ್ತಾರೆ.

“ಪ್ರತಿಯೊಂದು ತರಗತಿಯೂ ಉತ್ಸಾಹಭರಿತವಾಗಿರುತ್ತದೆ’’

ವ್ಯವಸ್ಥೆಯ ಬದಲಾವಣೆ ಮಾಡಲು ಪ್ರಯತ್ನಿಸುತ್ತಿರುವ ಶಿಕ್ಷಕರ ಸಣ್ಣ ಸಮೂಹದಲ್ಲಿ ಇದು ಈಗಾಗಲೇ ವ್ಯತ್ಯಾಸವನ್ನು ಉಂಟುಮಾಡುತ್ತಿದೆ.

ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದ ಬಸವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು L ಆಕಾರದ ಕಟ್ಟಡವನ್ನು ಹೊಂದಿದೆ. ಇದಕ್ಕೆ ಕಿತ್ತಳೆ ನಿಂಬೆ ಹಸಿರು ಬಣ್ಣವನ್ನು ಬಳಿಯಲಾಗಿದ್ದು, ಇಲ್ಲಿ ಒಂದರಿಂದ ಎಂಟನೇ ತರಗತಿವರೆಗಿನ 438 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಧೂಳಿನಿಂದ ಕೂಡಿದ ಮೈದಾನದಲ್ಲೇ ಆಟವಾಡುತ್ತಾರೆ. ಶಾಲೆಯಲ್ಲಿ 13 ಶಿಕ್ಷಕರಿದ್ದು, ಪ್ರತಿಯೊಂದು ತರಗತಿಯಲ್ಲಿ ಸರಾಸರಿ 30 ವಿದ್ಯಾರ್ಥಿಗಳಿದ್ದಾರೆ.

ಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ತರಗತಿಯನ್ನು ತೆಗೆದುಕೊಳ್ಳುವ ಶಿಕ್ಷಕಿ ಮಹಾಲಕ್ಷ್ಮಿ ಅಶೋಕ್ ಅವರು ಶಿಕ್ಷಾ ಕೋಪೈಲಟ್ ನೆರವು ಪಡೆಯುತ್ತಿದ್ದು, ಇದರಿಂದ ಸಾಕಷ್ಟು ಸಮಯ ಉಳಿತಾಯವಾಗುತ್ತಿದೆ ಮತ್ತು ಹೆಚ್ಚಿನ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿದೆ ಎಂದು ಹೇಳುತ್ತಾರೆ.

A female teacher at a computer, smiling
ಮಹಾಲಕ್ಷ್ಮಿ ಅಶೋಕ್, ಸರ್ಕಾರಿ ಶಾಲಾ ಶಿಕ್ಷಕಿ ಮತ್ತು ಹಂಗಾಮಿ ಮುಖ್ಯೋಪಾಧ್ಯಾಯಿನಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸವನಹಳ್ಳಿ, ಕರ್ನಾಟಕ ರಾಜ್ಯ, ಭಾರತ, ಇವರು ಶಿಕ್ಷಾ ಕೋಪೈಲಟ್ ನೊಂದಿಗೆ ಸಕ್ರಿಯರಾಗಿರುವುದು. ಮೈಕ್ರೋಸಾಫ್ಟ್ ಗಾಗಿ ಫೋಟೋ ತೆಗೆದವರು ಸೆಲ್ವಪ್ರಕಾಶ್ ಲಕ್ಷ್ಮಣನ್.

ಶಿಕ್ಷಕರು ಸಭೆ ನಡೆಸುವ ಕೊಠಡಿಯ ಗೋಡೆಗಳ ಮೇಲೆ ಕರ್ನಾಟಕದ ಪ್ರಮುಖರ ಭಾವಚಿತ್ರಗಳನ್ನು ಹಾಕಲಾಗಿದೆ. ಈ ಕೊಠಡಿಯಲ್ಲಿ ಮಹಾಲಕ್ಷ್ಮಿ ಅವರು ತಮ್ಮ ಲ್ಯಾಪ್ ಟಾಪ್ ಆನ್ ಮಾಡಿ ಶಿಕ್ಷಾ ಕೋಪೈಲಟ್ ಯೋಜನೆಯನ್ನು ಮತ್ತಷ್ಟು ಮನವರಿಕೆ ಮಾಡಿಕೊಳ್ಳುವಲ್ಲಿ ತಲ್ಲೀನರಾಗುತ್ತಾರೆ.

ಇದರ ಮೊದಲ ಪುಟದಲ್ಲಿ ಡ್ರಾಪ್-ಡೌನ್ ಮೆನುಗಳನ್ನು ಹೊಂದಿದ ಸರಣಿ ಇದೆ: ಇಲ್ಲಿ ಶಿಕ್ಷಣ ಮಂಡಳಿ, ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳಬೇಕು (ಇಂಗ್ಲೀಷ್ ಅಥವಾ ಕನ್ನಡ, ಮುಂಬರುವ ಇತರ ಸ್ಥಳೀಯ ಭಾಷೆಗಳೊಂದಿಗೆ), ನಂತರ ತರಗತಿ, ಸೆಮಿಸ್ಟರ್, ವಿಷಯ (ಪ್ರಸ್ತುತ ಇಂಗ್ಲೀಷ್, ಗಣಿತ, ಸಮಾಜ ವಿಜ್ಞಾನ ಮತ್ತು ವಿಜ್ಞಾನ)ಗಳಲ್ಲಿ ತಮ್ಮ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು.

ಆಕೆ ವಿಜ್ಞಾನವನ್ನು ಕ್ಲಿಕ್ ಮಾಡಿ, ಇದರಲ್ಲಿ “ Circulatory System’’ ವಿಷಯವನ್ನು ತೆಗೆದುಕೊಂಡರು ಮತ್ತು 40 ನಿಮಿಷಗಳ ಅವಧಿಯನ್ನು ಆಯ್ಕೆ ಮಾಡಿದರು. ತಕ್ಷಣವೇ ಶಿಕ್ಷಾ ಕೋಪೈಲಟ್ ಪಾಠದ ಯೋಜನೆಯನ್ನು ರಚಿಸಿತು. ಇದರಲ್ಲಿ ಪಿಡಿಎಫ್, ಪವರ್ ಪಾಯಿಂಟ್ ಸ್ಲೈಡ್ ಗಳು ಅಥವಾ ಹ್ಯಾಂಡ್ ಔಟ್ ಗಳನ್ನು ರಚಿಸುವ ಆಯ್ಕೆಯನ್ನೂ ನೀಡಿತು. ಅಲ್ಲದೇ, ಕೆಲವು ಚಟುವಟಿಕೆಗಳು, ವಿಡಿಯೋಗಳು ಮತ್ತು ಅಸೆಸ್ಮೆಂಟ್ ಗಳ ಬಗ್ಗೆಯೂ ಸಲಹೆಗಳನ್ನೂ ನೀಡಿತು. ಪ್ರತಿಯೊಂದು ಉಪ-ವಿಭಾಗದ ನಂತರ ರಚಿಸಲಾಗಿರುವುದಕ್ಕೆ ಶ್ರೇಯಾಂಕ ನೀಡುವ ಮೂರು ಎಮೋಜಿಗಳನ್ನೂ ನೀಡುತ್ತದೆ.

ಈ ಹಿಂದೆ ಮಹಾಲಕ್ಷ್ಮಿ ಅವರು ಹೃದಯ ರಕ್ತನಾಳದ ವ್ಯವಸ್ಥೆಯನ್ನು ಕಲಿಸುವಾಗ ಕಪ್ಪು ಹಲಗೆಯ ಮೇಲೆ ಹೃದಯದ ರೇಖಾಚಿತ್ರವನ್ನು ಬಿಡಿಸಿ ಅದರ ಕಾರ್ಯದ ಬಗ್ಗೆ ಮಾತನಾಡಬೇಕಿತ್ತು. ಆದರೆ, ಈಗ ಶಿಕ್ಷಾ ಕೋಪೈಲಟ್ ಸೂಚಿಸಿರುವ ಹೊಸ ಚಟುವಟಿಕೆಯನ್ನು ಪ್ರಯತ್ನಿಸುತ್ತಿದ್ದಾರೆ. ಇದರ ಪ್ರಕಾರ ಪ್ರತಿ ವಿದ್ಯಾರ್ಥಿಯು ತಮ್ಮ ನಾಡಿಯನ್ನು ಪರೀಕ್ಷಿಸಲು ಅಥವಾ ಪತ್ತೆ ಹಚ್ಚಲು ತಮ್ಮ ಮಣಿಕಟ್ಟಿನ ಮೇಲೆ ಬೆರಳನ್ನು ಹಾಕುತ್ತಾರೆ ಮತ್ತು ಪ್ರತಿ ನಿಮಿಷಕ್ಕೆ ನಾಡಿ ಬಡಿತಗಳನ್ನು ಅಳೆಯುತ್ತಾರೆ. ಇದರಿಂದ ಅವರಿಗೆ ಸುಲಭವಾಗಿ ಫಲಿತಾಂಶಗಳು ಬರಲಾರಂಭಿಸಿದವು ಮತ್ತು ಪರಸ್ಪರ ಫಲಿತಾಂಶಗಳನ್ನು ಹೋಲಿಕೆ ಮಾಡುವುದರಲ್ಲಿ ನಿಷ್ಣಾತರಾದರು. ಅಂದರೆ, ಕೆಲವರಿಗೆ ಹೃದಯ ಬಡಿತವು ವೇಗವಾಗಿ ಅಥವಾ ನಿಧಾನವಾಗಿ ಆಗುತ್ತದೆ ಎಂಬುದನ್ನು ಕಂಡುಕೊಂಡರು ಮತ್ತು ಈ ಬಗ್ಗೆ ಚರ್ಚೆಯನ್ನೂ ಮಾಡಿ ತಮಗಿದ್ದ ಸಂದೇಹಗಳನ್ನು ನಿವಾರಿಸಿಕೊಂಡರು ಎನ್ನುತ್ತಾರೆ ಮಹಾಲಕ್ಷ್ಮಿ.

ಕೋಪೈಲಟ್ ಸೂಚಿಸಿದ ಒಂದು ಚಟುವಟಿಕೆ- ಬ್ಲಡ್-ಟೈಪಿಂಗ್ ಲ್ಯಾಬ್. ಇದರ ಬಗ್ಗೆ ಪ್ರಶ್ನೆ ಇರಲಿಲ್ಲ. ಆದರೆ, ಇನ್ನೊಂದು ಚಟುವಟಿಕೆಯಲ್ಲಿ ಒಬ್ಬರ ರಕ್ತದೊತ್ತಡವನ್ನು ತೆಗೆದುಕೊಳ್ಳುವುದು- ಇದು ಸಾಧ್ಯವಿರಬಹುದು. ಮುಂದಿನ ಬಾರಿ ಮಕ್ಕಳಿಗೆ ಪ್ರಯೋಗ ಮಾಡಲು ಮನೆಯಿಂದ ರಕ್ತದೊತ್ತಡ ಕಫ್ ಅನ್ನು ತರಲು ಸೂಚಿಸಬಹುದು ಎಂದು ಮಹಾಲಕ್ಷ್ಮಿ ಭಾವಿಸುತ್ತಾರೆ.

“ನಿಸ್ಸಂಶಯವಾಗಿ, ಅವರು ಈ ಪ್ರಯೋಗಗಳನ್ನು ಇಷ್ಟಪಡುತ್ತಾರೆ’’ ಎಂದು ಮಹಾಲಕ್ಷ್ಮಿ ಹೇಳಿದರು. ಅವರು ಕಳೆದ 20 ವರ್ಷಗಳಿಂದ ಪಾಠ ಮಾಡುತ್ತಿದ್ದಾರೆ ಮತ್ತು ಪ್ರಸ್ತುತ ಶಾಲೆಯ ಮುಖ್ಯಸ್ಥೆಯೂ ಆಗಿದ್ದಾರೆ. “ಈ ಪದ್ಧತಿಯಿಂದ ಪ್ರತಿಯೊಂದು ತರಗತಿಯೂ ಉತ್ಸಾಹಭರಿತವಾಗುತ್ತಿದೆ ಮತ್ತು ಕಲಿಕೆಯೂ ಸುಲಭವಾಗುತ್ತಿದೆ’’ ಎಂದು ಮಹಾಲಕ್ಷ್ಮಿ ಹರ್ಷ ವ್ಯಕ್ತಪಡಿಸುತ್ತಾರೆ.

A female teacher demonstrating a science experiment to students in a classroom
ಮಹಾಲಕ್ಷ್ಮಿ ಅಶೋಕ್, ಸರ್ಕಾರಿ ಶಾಲಾ ಶಿಕ್ಷಕಿ ಮತ್ತು ಹಂಗಾಮಿ ಮುಖ್ಯೋಪಾಧ್ಯಾಯಿನಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸವನಹಳ್ಳಿ, ಕರ್ನಾಟಕ ರಾಜ್ಯ, ಭಾರತ, ಇವರು ಶಿಕ್ಷಾ ಕೋಪೈಲಟ್ ಸಲಹೆಯಂತೆ ಪ್ರಯೋಗವನ್ನು ಪ್ರದರ್ಶಿಸುತ್ತಿರುವುದು. ಮೈಕ್ರೋಸಾಫ್ಟ್ ಗಾಗಿ ಫೋಟೋ ತೆಗೆದವರು ಸೆಲ್ವಪ್ರಕಾಶ್ ಲಕ್ಷ್ಮಣನ್.

ಇತ್ತೀಚಿನ ವಿಜ್ಞಾನ ತರಗತಿಯಲ್ಲಿ “ಪದಾರ್ಥಗಳನ್ನು ಬೇರ್ಪಡಿಸುವುದು’’ ಎಂಬ ವಿಷಯದ ಕುರಿತು ಪಾಠವನ್ನು ವಿವರಿಸಲು ಅಕ್ಕಿ, ಗೋಧಿ, ಮರಳು ಮತ್ತು ನೀರನ್ನು ಸಣ್ಣ ಚೀಲಗಳಲ್ಲಿ ತಂದಿದ್ದರು. 6 ನೇ ತರಗತಿಯ ವಿದ್ಯಾರ್ಥಿಗಳು ಸಂಪೂರ್ಣ ಬಿಳಿ ಸಮವಸ್ತ್ರ ಧರಿಸಿ, ಲೂಪ್ಡ್ ಬ್ರೇಡ್ ನಲ್ಲಿ ಹುಡುಗಿಯರು ಬಂದಿದ್ದರು ಮತ್ತು ತರಗತಿಯ ವಿಷಯದ ಪರಿಕಲ್ಪನೆಗಳನ್ನು ಈಗಾಗಲೇ ತಿಳಿದಿದ್ದರು. ಶಿಕ್ಷಕಿ ಮಹಾಲಕ್ಷ್ಮಿಯವರು ಚಲನವಲನಗಳ ಮೂಲಕ ಪಾಠ ಹೇಳುತ್ತಾ ಹೋದಂತೆ ಮಕ್ಕಳು ಒಕ್ಕೊರಲಿನಿಂದ “ಕೈನಲ್ಲಿ ಆರಿಸಿರುವುದು! ಗೆಲ್ಲುವುದು! ಸಂಗ್ರಹಿಸುವುದು! ಶೋಧನೆ!’’ ಎಂಬಿತ್ಯಾದಿಯಾಗಿ ಕೂಗಿದರು.

ಈ ರೀತಿಯಾಗಿ ಈ ಹಿಂದೆ ಪಾಠ ಮಾಡಿದ್ದೀರಾ? ಎಂದು ಕೇಳಲಾದ ಪ್ರಶ್ನೆಗೆ ಮಹಾಲಕ್ಷ್ಮಿಯವರು “ಇಲ್ಲ’’ ಎಂದು ಉತ್ತರಿಸಿದರು. “ಅಯ್ಯೋ ನನಗೆ ಸಮಯವೇ ಸಿಗುತ್ತಿರಲಿಲ್ಲ’’ ಎಂದು ಹೇಳಿದರು.

ಪಾಠ ಯೋಜನೆಗಳ ಹೊರತಾಗಿ

ಶಿಕ್ಷಣ ಫೌಂಡೇಶನ್ ನ ಚೀಫ್ ಪ್ರೋಗ್ರಾಂ ಆಫೀಸರ್ ಸ್ಮಿತಾ ವೆಂಕಟೇಶ್ ಅವರು ಮಾತನಾಡಿ, “ಮುಂದಿನ ಹಂತದಲ್ಲಿ ಮಾರ್ಚ್ ನಲ್ಲಿ ಶೈಕ್ಷಣಿಕ ವರ್ಷದ ಅತ್ಯದ ವೇಳೆಗೆ ಈ ಪೈಲಟ್ ಯೋಜನೆಯನ್ನು ಇನ್ನೂ 100 ಶಾಲೆಗಳಿಗೆ ವಿಸ್ತರಿಸಲಾಗುವುದು. ನಂತರ ಏಪ್ರಿಲ್ ನಿಂದ ನಮ್ಮ ತಂಡವು ಉತ್ತಮ ಮೌಲ್ಯದ ಪಾಠ ಯೋಜನೆಗಳನ್ನು ಸಂಗ್ರಹ ಕಾರ್ಯವನ್ನು ಆರಂಭಿಸಲಿದೆ. ಆದ್ದರಿಂದ ಶಿಕ್ಷಕರು ಹೊಸದನ್ನು ರಚಿಸುವ ಬದಲು ಈಗಿರುವ ಪಠ್ಯ ಯೋಜನೆಗಳನ್ನು ಮಾರ್ಪಾಟು ಮಾಡಬಹುದು’’ ಎಂದರು.

A female NGO worker standing in a classroom with students in the background
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವೆಂಕಟರಾಯನದೊಡ್ಡಿ, ಕನಕಪುರ, ಕರ್ನಾಟಕ, ಭಾರತ, ಇಲ್ಲಿ ಶಿಕ್ಷಣ ಫೌಂಡೇಶನ್ ನ ಪ್ರೋಗ್ರಾಂ ಆಫೀಸರ್ ಸ್ಮಿತಾ ವೆಂಕಟೇಶ್ ಅವರು. ಮೈಕ್ರೋಸಾಫ್ಟ್ ಗಾಗಿ ಫೋಟೋ ತೆಗೆದವರು ಸೆಲ್ವಪ್ರಕಾಶ್ ಲಕ್ಷ್ಮಣನ್.

ಯುಎಸ್ ನಲ್ಲಿ ವ್ಯಾಸಂಗ ಮಾಡಿ ಅಲ್ಲಿಯೇ ಕೆಲಸ ಮಾಡಿದ ನಂತರ 11 ವರ್ಷಗಳ ಹಿಂದೆ ಸ್ಮಿತಾ ಅವರು ಶಿಕ್ಷಣವನ್ನು ಸೇರಿಕೊಂಡರು. ಇಲ್ಲಿ ಸೇರಿದ ನಂತರ ಶಿಕ್ಷಕ ಸಮುದಾಯ ಎದುರಿಸುತ್ತಿರುವ ಅಸಂಖ‍್ಯಾತ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದು ಅವರು ಹೇಳಿದರು.

“ಸರ್ಕಾರಿ ಶಾಲೆಗಳು ಸರಿಯಿಲ್ಲ ಎಂಬ ಮಾತುಗಳಿವೆ. ಆದರೆ, ಶಿಕ್ಷಕರು ಕಲಿಸುವುದರ ಜೊತೆಗೆ ಹೆಚ್ಚಿನ ಕೆಲಸವನ್ನು ಮಾಡುತ್ತಿರುವುದನ್ನು ನಾವು ಗಮನಿಸಿದ್ದೇವೆ. ಮಕ್ಕಳಿಗೆ ಕಲಿಸುವುದಷ್ಟೇ ಅಲ್ಲ. ಇದರ ಜೊತೆಗೆ ಮಕ್ಕಳಿಗೆ ಸಮವಸ್ತ್ರಕ್ಕೆ ವ್ಯವಸ್ಥೆ ಮಾಡುವುದು, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ನಿಭಾಯಿಸುವುದು, ಜನಗಣತಿ ಮಾಡುವುದು ಸೇರಿದಂತೆ ಇನ್ನೂ ಅನೇಕ ಕಾರ್ಯಗಳಲ್ಲಿ ತೊಡಗುತ್ತಿದ್ದಾರೆ. ಈ ಸವಾಲುಗಳನ್ನು ಹೊಂದಿರುವ ಶಿಕ್ಷಕರಿಗೆ ಇನ್ನೂ ಉತ್ತಮ ಬೋಧನೆ ಮಾಡಲು ಅನುಕೂಲವಾಗುವ ರೀತಿಯಲ್ಲಿ ಶಿಕ್ಷಾ ಕೋಪೈಲಟ್ ವಿನ್ಯಾಸಗೊಳಿಸಲಾಗಿದೆ ಮತ್ತು ಇದರಿಂದ ಅವರಿಗೆ ನೆರವಾಗುತ್ತಿದೆ’’ ಎಂದು ಸ್ಮಿತಾ ತಿಳಿಸಿದರು.

“ಬಹುಶಃ ಭವಿಷ್ಯದಲ್ಲಿ ಶಿಕ್ಷಾ ಕೋಪೈಲಟ್ ತರಗತಿಗಳನ್ನು ನಿಗದಿ ಮಾಡುವುದು ಅಥವಾ ಟ್ರ್ಯಾಕಿಂಗ್ ಕಲಿಕೆಯಂತಹ ಇತರ ಕಾರ್ಯಗಳಿಗೂ ಸಹ ಸಹಾಯ ಮಾಡಬಹುದು. ಅಲ್ಲದೇ ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ನೆರವಾಗಲಿದೆ’’ ಎಂದು ಅವರು ಹೇಳಿದರು.

“AI ಅತ್ಯಾಕರ್ಷಕವಾಗಿದೆ, ಹೌದು. ಆದರೆ, ದಿನದ ಕೊನೆಯಲ್ಲಿ ಅದು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿ ಸಮೂಹಕ್ಕೆ ಸಹಾಯ ಮಾಡಬಹುದೇ?’’ ಎಂಬ ಪ್ರಶ್ನೆಯನ್ನು ಸ್ಮಿತಾ ಕೇಳುತ್ತಾರೆ.

ಕಥೆಯ ಮೊದಲ ಚಿತ್ರ: ಕನಕಪುರದ ವೆಂಕಟರಾಯನದೊಡ್ಡಿ, ಕರ್ನಾಟಕ, ಭಾರತ, ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7 ನೇ ಇಯತ್ತೆಯ ವಿಜ್ಞಾನ ತರಗತಿಯಲ್ಲಿ ಶಿಕ್ಷಕ ರವೀಂದ್ರ ಕೆ ನಾಗಯ್ಯ ಅವರು. ಮೈಕ್ರೋಸಾಫ್ಟ್ ಗಾಗಿ ಫೋಟೋ ತೆಗೆದವರು ಸೆಲ್ವಪ್ರಕಾಶ್ ಲಕ್ಷ್ಮಣನ್.